ಕೂದಲು 
	ಸಸ್ತನಿಗಳ (ಮ್ಯಾಮಲ್ಸ್) ಚರ್ಮದ ಎಪಿಡರ್ಮಿಸ್ ಪದರದಿಂದ ಹುಟ್ಟಿ ಬೆಳೆದು ದೇಹದ ತುಪ್ಪುಳು ಅಥವಾ ಹೊದಿಕೆಯನ್ನು ಉಂಟುಮಾಡುವ ಎಳೆರೂಪದ ನಿರ್ಜೀವ ಬಾಹ್ಯ ಬೆಳೆವಣಿಗೆ (ಹೇರ್). ಕೂದಲು ಬಹಳ ಉದ್ದವಾಗಿಯೊ ಇಲ್ಲವೆ ಅತಿ ಕಿರಿಯದಾಗಿಯೊ ಇರಬಹುದು. ಇದರಲ್ಲಿ ಕೆರಟಿನ್ ಎಂಬ ವಿಶೇಷ ಬಗೆಯ ವಸ್ತುವಿನಿಂದ ಆವೃತವಾದ ಹಲವಾರು ಜೀವಕೋಶಗಳಿವೆ. ಇವೆಲ್ಲ ಒಟ್ಟಿಗೆ ಕೂಡಿಕೊಂಡು ಎಳೆಯಂಥ ರಚನೆಯಾಗುತ್ತದೆ. ಸಸ್ತನಿಗಳಲ್ಲಿ ಮಾತ್ರ ಕಂಡುಬರುವ ಈ ವಿಶೇಷ ರಚನೆ ಪ್ರಾಣಿಪ್ರಪಂಚದ ಬೇರಾವ ಪ್ರಾಣಿಗಳಲ್ಲೂ ಇಲ್ಲ. ಈ ಕಾರಣದಿಂದ ಸಸ್ತನಿ ಗುಂಪಿಗೆ ಪೈಲಿಫೆರ(ಅಂದರೆ ಕೂದಲುಳ್ಳ ಪ್ರಾಣಿಗಳು) ಎಂಬ ಹೆಸರನ್ನು ಕೊಡಬೇಕೆಂಬ ಸೂಚನೆಯೂ ಇದೆ. ಸಸ್ತನಿಗಳಲ್ಲಿ ಮಾತ್ರ ಕೂದಲು ಕಂಡುಬಂದರೂ ಸಸ್ತನಿಗಳಲ್ಲದ ಬೇರೆ ಪ್ರಾಣಿಗಳ ದೇಹದ ಮೇಲಿರುವ ಒರಟಾದ, ಬಿರುಸಾದ ಎಳೆಗಳಂಥ ರಚನೆಗಳಿಗೂ ಸಸ್ಯಗಳ ಕಾಂಡ. ಬೇರು ಮತ್ತು ಎಲೆಗಳ ಮೇಲೆ ಕಾಣಬರುವ ಏಕಕೋಶಿ ಅಥವಾ ಬಹುಕೋಶಿ ಎಳೆಗಳಿಗೂ ಕೂದಲು ಎಂಬ ಹೆಸರೇ ಇದೆ. ಆದರೆ ಇವಕ್ಕೂ ಸಸ್ತನಿಗಳ ಕೂದಲಿಗೂ ಭಿನ್ನತೆಯಿದೆ. ಈ ಲೇಖನದಲ್ಲಿ ಸಸ್ತನಿಗಳ (ಮನುಷ್ಯನೂ ಸೇರಿ) ಕೂದಲನ್ನು ಮಾತ್ರ ವಿವರಿಸಲಾಗಿದೆ.

	ಕೂದಲು ಇಲ್ಲದ ಸಸ್ತನಿಯೇ ಇಲ್ಲ. ಆದರೆ ಇದರ ಮೊತ್ತದಲ್ಲಿ ವ್ಯತ್ಯಾಸವಿದೆ. ಕೆಲವು ಪ್ರಾಣಿಗಳ ದೇಹದಲ್ಲಿ ಕೂದಲು ಬಲು ವಿರಳವಾಗಿದೆ. ಉದಾಹರಣೆಗೆ ಜಲವಾಸಿಯಾದ ತಿಮಿಂಗಲದಲ್ಲಿ ಅದರ ಮೂತಿಯ ಮೇಲೆ ಮಾತ್ರ ಕೆಲವೇ ಕೂದಲುಗಳಿವೆ. ಈ ಸ್ಥಿರಿಗೆ ಹೈಪೊಟ್ರೈಕೋಸಿಸ್ ಎಂದು ಹೆಸರು. ಇನ್ನು ಕೆಲವು ಪ್ರಾಣಿಗಳ ದೇಹವೆಲ್ಲ ಕೂದಲುಮಯ. ಉದಾಹರಣೆಗೆ ಕರಡಿ, ಈ ಸ್ಥಿತಿಗೆ ಹೈಪರ್‍ಟ್ರೈಕೋಸಿಸ್ ಎಂದು ಹೆಸರು. ಆದರೆ ಎಲ್ಲ ಸಸ್ತನಿಗಳಲ್ಲೂ ಅವುಗಳ ಗರ್ಭಾವಸ್ಥೆಯಲ್ಲಿ ಕೂದಲು ಇದ್ದೇ ಇರುತ್ತದೆ. ಮನುಷ್ಯನಲ್ಲಿ ಅಂಗೈ, ಅಂಗಾಲು, ತುಟಿ, ಮೊಲೆತೊಟ್ಟು, ಹೊಕ್ಕುಳು ಮುಂತಾದ ಕೆಲವು ಭಾಗಗಳನ್ನು ಬಿಟ್ಟು ಉಳಿದೆಲ್ಲ ಪ್ರದೇಶಗಳಲ್ಲೂ ಕೂದಲು ಇದೆ.

	ಕೂದಲಿನ ಬಗೆಗಳು: ಕೂದಲಿನ ಬಾಹ್ಯರೂಪದಲ್ಲೂ ಬಣ್ಣದಲ್ಲೂ ವೈವಿಧ್ಯ ಉಂಟು. ಕೆಲವು ರೀತಿಯ ಕೂದಲುಗಳು ನಯ, ನುಣುಪು ಮತ್ತು ಮೃದು. ಇನ್ನು ಕೆಲವು ಗಡುಸು ಮತ್ತು ಒರಟು. ಹಾಗೆಯೇ ಕೂದಲು ನೀಳವಾಗಿರಬಹುದು(ಸ್ಟ್ರೇಟ್), ಅಲೆಗಳಂತಿರಬಹುದು(ವೇವಿ) ಇಲ್ಲವೆ ಗುಂಗುರುಗುಂಗುರಾಗಿರಬಹುದು(ಕರ್ಲಿ). ಮಾನವನ ವಿವಿಧ ಬುಡಕಟ್ಟುಗಳಲ್ಲಿ ಈ ವ್ಯತ್ಯಾಸಗಳನ್ನು ಚೆನ್ನಾಗಿ ಕಾಣಬಹುದು. ಮಂಗೋಲಾಯ್ಡ್‍ಗಳ ಕೂದಲು ಉದ್ದ. ನೀಳ ಮತ್ತು ಒರಟು. ವಿಪರೀತ ಗುಂಗುರಾಗಿರುವ ಕೂದಲು ನೀಗ್ರಾಯಿಡ್‍ಗಳಲ್ಲಿ ಹೆಚ್ಚು. ಮೃದುವಾದ, ರೇಷ್ಮೆಯಂಥ, ಅಲೆಗಳ ರೂಪದ ಕೂದಲು ಕಾಕಸಾಯಿಡ್‍ಗಳಲ್ಲಿ ಕಂಡುಬರುತ್ತದೆ. ಇವು ಮೂರು ಮುಖ್ಯ ಬಗೆಗಳಾದರೆ ಇವುಗಳ ಮಧ್ಯವರ್ತಿ ಬಗೆಯ ಕೂದಲುಗಳನ್ನೂ ಕಾಣಬಹುದಾಗಿದೆ. ವಿವಿಧ ಬಗೆಯ ಕೂದಲುಗಳ ಅಡ್ಡಸೀಳಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಅವುಗಳ ಆಕಾರಗಳಲ್ಲಿನ ವ್ಯತ್ಯಾಸಗಳನ್ನು ಗಮನಿಸಬಹುದು. ನೀಳವಾದ ಕೂದಲಿನಲ್ಲಿ ಅಡ್ಡಸೀಳಿಕೆ ಗುಂಡಗಿರುತ್ತದೆ. ಅಲೆಗಳಂಥ ಕೂದಲಿನ ಅಡ್ಡಸೀಳಿಕೆ ಅಂಡಾಕಾರವನ್ನು ತೋರುತ್ತದೆ. ಗುಂಗುರುಕೂದಲಿನ ಅಡ್ಡಸೀಳಿಕೆ ಚಪ್ಪಟೆಯಾಗಿಯೊ ಅವರೆ ಬೀಜದಾಕಾರದಲ್ಲೊ ಇರುತ್ತದೆ. ಕೂದಲಿನ ಅಡ್ಡಸೀಳಿಕೆ ಚಪ್ಪಟೆಯಾಗಿಯೊ ಅವರೆ ಬೀಜದಾಕಾರದಲ್ಲೊ ಇರುತ್ತದೆ.

	ಕೂದಲಿನ ಬಣ್ಣದಲ್ಲಿ ನಸುಕಂದಿನಿಂದ ಹಿಡಿದು ಕರಿಬಣ್ಣದವರೆಗೂ ವ್ಯತ್ಯಾಸವನ್ನು ಕಾಣಬಹುದು. ಕಾಕಸಾಯಿಡ್ ಬುಡಕಟ್ಟಿನಲ್ಲಿ ನಸುಕಂದು ಬಣ್ಣವೇ ಪ್ರಮುಖವಾದರೆ ನೀಗ್ರಾಯಿಡ್‍ಗಳಲ್ಲಿ ಕಪ್ಪುಬಣ್ಣ ಹೆಚ್ಚು ಪ್ರಾಮುಖ್ಯ. ಕೂದಲಿನ ಬಣ್ಣಕ್ಕೆ ಮುಖ್ಯ ಕಾರಣ ಇದರ ಒಳಗಿನ ಜೀವಕೋಶÀಗಳಲ್ಲಿರುವ ಮೆಲನಿನ್ ಎಂಬ ವರ್ಣಕ. ಇದರ ಪರಿಮಾಣ ವಿವಿಧ ಬಗೆಯ ಕೂದಲುಗಳಲ್ಲಿ ಬೇರೆಬೇರೆಯಾಗಿದ್ದು ಕೂದಲಿನ ಒಟ್ಟು ಬಣ್ಣದ ವೈದಿಧ್ಯಕ್ಕೆ ಕಾರಣವಾಗಿದೆ. ಅಲ್ಲದೆ ಕೂದಲಿನ ಕೇಂದ್ರಭಾಗವಾದ ಮಿಡಲ ಎಂಬುದರ ಜೀವಕೋಶಗಳ ನಡುವೆ ಇರುವ ಸೂಕ್ಷ್ಮವಾದ ಗಾಳಿಗುಳ್ಳೆಗಳೂ ಕೂದಲಿನ ಹೊರಮೈಯೂ ಕೂದಲಿನ ವರ್ಣ ವ್ಯತ್ಯಾಸಕ್ಕೂ ಹೊಳಪಿಗೂ ಕಾರಣಗಳೆಂದು ತಿಳಿದುಬಂದಿದೆ.

	ಮೆಲನಿನ್ ವರ್ಣಕದ ಉತ್ಪತ್ತಿ ನಿಂತಾಗ ಕೂದಲಿನಲ್ಲಿರುವ ವರ್ಣಕ ನಾಶವಾಗುತ್ತದೆ. ಮತ್ತು ಕೂದಲು ನರೆಯುತ್ತದೆ. ಸಾಮಾನ್ಯವಾಗಿ ಮನುಷ್ಯರಲ್ಲಿ ಕೂದಲಿನ ನರೆಯುವಿಕೆ 40-45 ವರ್ಷ ವಯಸ್ಸಾದ ಮೇಲೆ ತಲೆಯ ಎರಡೂ ಬದಿಗಳಲ್ಲಿ ಕಿವಿಯ ಮೇಲ್ಗಡೆ ಆರಂಭವಾಗಿ ಕ್ರಮೇಣ ತಲೆಯನ್ನೆಲ್ಲ ಆವರಿಸುತ್ತದೆ. ದೇಹದ ಉಳಿದ ಭಾಗಗಳಲ್ಲೂ ಕೆಲಕಾಲಾನಂತರ ಕೂದಲು ನರೆಯುವುದುಂಟು. ಆದರೆ ಅನೇಕ ವೇಳೆ ಕೆಲವು ಕಾಯಿಲೆಗಳಿಂದ, ಮಾನಸಿಕ ಆಘಾತದಿಂದ ಕೂದಲು ಬೇಗನೆ ನರೆಯುವುದೂ ಇದೆ. ಅಲ್ಲದೆ ಬಹಳ ಚಿಕ್ಕ ವಯಸ್ಸಿನಲ್ಲೇ ಕೂದಲು ನರೆಯಬಹುದು. ಹೀಗಾಗುವುದನ್ನು ಅಕಾಲನರೆ ಎನ್ನುತ್ತಾರೆ. ಇದು ಅನುವಂಶಿಕ ದೋಷವೆಂದು ತಿಳಿದಿದೆ. ಮನುಷ್ಯರಲ್ಲಿ ಕೂದಲ ನರೆ ಜೀವಮಾನದಲ್ಲಿ ಒಂದು ಬಾರಿ ಮಾತ್ರ ಆಗುವುದಾದರೆ ಕೆಲವು ಪ್ರಾಣಿಗಳಲ್ಲಿ ವರ್ಷದ ಋತುಗಳಿಗನುಗುಣವಾಗಿ ಬಿಳಿ ಮತ್ತು ಕರಿಯ ಕೂದಲುಗಳು ಪರ್ಯಾಯವಾಗಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಮೇರು ಪ್ರದೇಶದ ನರೆಇ ಮತ್ತು ಮೊಲ. ಬೇಸಗೆಯಲ್ಲಿ ಕಗ್ಗಂದು ಅಥವಾ ಕಪ್ಪಗಿರುವ ಇವುಗಳ ಕೂದಲು ಚಳಿಗಾಲ ಬಂದಂತೆ ವರ್ಣರಹಿತವಾಗುತ್ತ ಬಂದು ಕೊನೆಗೆ ಬಿಳಿಬಣ್ಣವಾಗುತ್ತವೆ. ಮತ್ತೆ ಬೇಸಗೆ ಬಂದಾಗ ಕೂದಲು ಕಪ್ಪಗಾಗುತ್ತವೆ.

	ಕೂದಲಿನ ರೂಪರಚನೆ ಮತ್ತು ಕಾರ್ಯವ್ಯಾಪ್ತಿಯ ಆಧಾರದ ಮೇಲೆ ಮನುಷ್ಯನ ದೇಹದಲ್ಲಿ ಮೂರು ಬಗೆಯ ಕೂದಲನ್ನೂ ಇತರ ಸಸ್ತನಿಗಳ ದೇಹದಲ್ಲಿ ಎರಡು ಬಗೆಯ ಕೂದಲನ್ನೂ ಗುರುತಿಸಬಹುದು. 

	ಮನುಷ್ಯನ ಕೂದಲು 3 ಬಗೆ: 1.ಲ್ಯಾನುಗೋ-ಗರ್ಭದೊಳಗಿನ ಶಿಶುವಿನ ದೇಹದ ಮೇಲಿರುವ ಬಗೆ. ಈ ಬಗೆಯಕೂದಲು ಸಾಮಾನ್ಯವಾಗಿ ಕೂಸು ಹುಟ್ಟುವುದಕ್ಕೆ 5-6 ತಿಂಗಳ ಮುಂಚೆಯೇ ಹುಟ್ಟಿ ಸುಮಾರು 2 ತಿಂಗಳ ತನಕ ಬೆಳೆಯುತ್ತದೆ. ಇದು ಬಲು ಮೃದುವಾಗಿಯೂ ಸೂಕ್ಷ್ಮವಾಗಿಯೂ ತೆಳುವಾಗಿಯೂ ಇದೆ. ಬಣ್ಣ ಇಲ್ಲ. ಕೂಸು ಹುಟ್ಟುವುದಕ್ಕೆ ಸ್ವಲ್ಪ ಮುಂಚೆ ಇಲ್ಲವೆ ಹುಟ್ಟಿದ ಕೆಲವೇ ದಿನಗಳಲ್ಲಿ ಉದುರಿಹೋಗುತ್ತದೆ. 2. ವೆಲಸ್- ಕೂಸು ಹುಟ್ಟಿದ ಮೇಲೆ ಕ್ರಮೇಣ ದೇಹದ ಮೇಲೆಲ್ಲ ಬೆಳೆಯುವ ಕೂದಲು. ಇದು ಸಹ ಮೃದುವಾಗಿ ಚಿಕ್ಕದಾಗಿ ಇದೆ. ಬಣ್ಣ ಹೆಚ್ಚಾಗಿಲ್ಲ. ವೆಲಸ್ ಕೂದಲು ಬೆಳೆಯುತ್ತಿರುವಂತೆಯೆ ಹುಬ್ಬು, ತಲೆ, ರೆಪ್ಪೆಗಳ ಮೃದುವಾದ ಲ್ಯಾನುಗೊ ಕೂದಲುಗಳು ಕ್ರಮೇಣ ಉದ್ದವಾಗುತ್ತ ಬರುತ್ತವೆ. ಕೆಲ ಕಾಲಾನಂತರ ಉದ್ದವಾದ ಹೆಚ್ಚು ಬಿರುಸಾದ ಕೂದಲುಗಳು ಇಲ್ಲೆಲ್ಲ ಬೆಳೆಯುತ್ತವೆ. 3.ಟರ್ಮಿನಲ್- ಪ್ರೌಢಾವಸ್ಥೆಯನ್ನು ತಲುಪಿದ ಅನಂತರ ಮೂಡುವ ಕೂದಲು. ಉಳಿದೆರಡು ಬಗೆಗಳಿಗಿಂತ ಹೆಚ್ಚು ಉದ್ದವೂ ಒರಟೂ ಬಣ್ಣವುಳ್ಳದ್ದೂ ಆಗಿದೆ. ಇದು ಸಾಮಾನ್ಯವಾಗಿ ಕಂಕುಳು, ಮುಂಡದ ಕೆಲವು ನಿರ್ದಿಷ್ಟ ಪ್ರದೇಶಗಳು, ಕೈಕಾಲುಗಳು, ಜನನೇಂದ್ರಿಯಗಳ ಸುತ್ತಣ ಪ್ರದೇಶ ಮತ್ತು ಗಂಡಸರಲ್ಲಿ ಕೆನ್ನೆ ಮತ್ತು ಮೇಲ್ದುಟಿಯ ಮೇಲ್ಭಾಗದಲ್ಲಿ ಬೆಳೆಯುತ್ತದೆ. ಅಪೂರ್ವವಾಗಿ ಹೆಂಗಸರಲ್ಲೂ ಕೆನ್ನೆಯ ಮೇಲೆ, ತುಟಿಯ ಮೇಲೆ ಕಾಣಿಸಿಕೊಳ್ಳುವುದುಂಟು. ಟರ್ಮಿನಲ್ ಕೂದಲಿನ ಒಟ್ಟು ಪರಿಮಾಣ ವ್ಯಕ್ತಿ, ಬುಡಕಟ್ಟು, ವ್ಯಕ್ತಿಯ ಲಿಂಗ ಇವುಗಳಿಗೆ ಅನುಗುಣವಾಗಿ ಭಿನ್ನತೆಯನ್ನು ಪ್ರದರ್ಶಿಸುತ್ತದೆ. ಸಾಮಾನ್ಯವಾಗಿ ಗಂಡಸಿನಲ್ಲಿ ಇದರ ಪರಿಮಾಣ ಹೆಚ್ಚು, ಹೆಂಗಸಿನಲ್ಲಿ ವೆಲಸ್ ಕೂದಲಿನ ಪರಿಮಾಣವೇ ಹೆಚ್ಚು. ಒಟ್ಟಾರೆ ಹೇಳುವುದಾದರೆ ಮನುಷ್ಯನಲ್ಲಿ ಟರ್ಮಿನಲ್ ಕೂದಲಿನ ಪರಿಮಾಣ ಕಡಿಮೆ. ಇತರ ಸಸ್ತನಿಗಳಲ್ಲಿ ಹೆಚ್ಚು. 

ಪ್ರಾಣಿಗಳಲ್ಲಿ ಸ್ಪರ್ಶಗ್ರಾಹಿ (ಟ್ಯಾಕ್ಟೈಲ್) ಕೂದಲು ಮತ್ತು ಹೊದಿಕೆಯ (ಕೋಟ್) ಕೂದಲು ಎಂಬ ಎರಡು ಬಗೆಗಳಿವೆ. ಸ್ಪರ್ಶಗ್ರಾಹಿ ಕೂದಲುಗಳ ಬುಡದಲ್ಲಿ ವಿಪುಲವಾಗಿ ಕವಲೊಡೆದ ರಕ್ತನಾಳ ಮತ್ತು ನರಗಳಿದ್ದು ಈ ಕೂದಲುಗಳು ಇವುಗಳ ಹೆಸರೇ ಹೇಳುವಂತೆ ಸ್ಪರ್ಶಕ್ಕೆ ಸೂಕ್ಷ್ಮವೇದಿಗಳಾಗಿದೆ. ಇವಕ್ಕೆ ವೈಬ್ರಿಸೀ ಎಂಬ ಹೆಸರೂ ಇದೆ. ಉದಾಹರಣೆಗೆ ಬೆಕ್ಕು , ಇಲಿ ಮುಂತಾದ ಪ್ರಾಣಿಗಳ ಮೂತಿಯಲ್ಲಿ ಈ ಬಗೆಯ ಕೂದಲುಗಳಿವೆ. ಹೊದಿಕೆಯ ಕೂದಲುಗಳು ಪ್ರಾಣಿಯ ದೇಹಕ್ಕೆ ರಕ್ಷಣೆಯೊದಗಿಸುತ್ತವೆ. ಇವುಗಳಲ್ಲಿ ದೇಹದ ಬೆನ್ನುಭಾಗದ ಉದ್ದವಾದ ಮತ್ತು ಬಿರುಸಾದ ಕೂದಲು, ಹಾಗೂ ಹೊಟ್ಟೆಯ ಭಾಗದ ಸ್ವಲ್ಪ ಚಿಕ್ಕದಾದ ಮತ್ತು ಮೃದುವಾದ ಕೂದಲು ಎಂದು ಎರಡು ಬಗೆಗಳುಂಟು.

	ಕೂದಲಿನ ರಚನೆ: ಕೂದಲಿನಲ್ಲಿ ಮೂರು ಮುಖ್ಯ ಭಾಗಗಳನ್ನು ಗುರುತಿಸಬಹುದು. 1.ಚೂಪಾಗಿರುವ ಕೂದಲಿನ ತುದಿ. 2.ರೋಮದಂಡ(ಹೇರ್ ಶಾಫ್ಟ್) ಮತ್ತು 3. ಕೂದಲಿನ ಬೇರು ಅಥವಾ ಬುಡ(ಹೇರ್ ರೂಟ್). ಕೂದಲಿನ ಬೇರು ರೋಮಕೂಪ(ಹೇರ್ ಫಾಲಿಕಲ್) ಎಂಬ ವಿಶಿಷ್ಟ ಬಗೆಯ ಕೊಳವೆಯಂಥ ರಚನೆಯಲ್ಲಿ ಹುದುಗಿದೆ. ಎಪಿಡರ್ಮಿಸ್ ಪದರ ಡರ್ಮಿಸ್ ಪದರದೊಳಗೆ ನುಗ್ಗಿ ಉಂಟಾಗುವ ಕಿರಿದಾದ ರಚನೆಯೇ ರೋಮಕೂಪ. ಕೂದಲಿನ ಬೇರುಭಾಗ ಪೂರ್ಣವಾಗಿ ಬೆಳೆದು ನಿಂತಿರುವ ಕೂದಲುಗಳಲ್ಲಿ ಗೆಡ್ಡೆಯಂತೆ ಉಬ್ಬಿಕೊಂಡಿದೆ. ರೋಮಕೂಪದಿಂದ ಹೊರಚಾಚಿದ ಭಾಗವೇ ರೋಮದಂಡ. ಇದರ ಅಡ್ಡಸೀಳಿಕೆಯನ್ನು ಸೂಕ್ಷ್ಮದರ್ಶಕದಲ್ಲಿ ಪರಿಶೀಲಿಸಿದಾಗ ಇದರ ಕೇಂದ್ರಭಾಗದಲ್ಲಿ ಚಪ್ಪಟೆಯಾದ ಜೀವಕೋಶಗಳಿಂದ ಕೂಡಿದ ಮಿಡಲ ಪ್ರದೇಶವೂ ಇದರ ಸುತ್ತ ಉದ್ದನೆಯ ಹಾಗೂ ಕೂದಲಿನ ಲಂಬಾಕ್ಷಕ್ಕೆ ಸಮಾಂತರವಾಗಿ ಜೋಡಣೆಗೊಂಡಿರುವ ಜೀವಕೋಶಗಳನ್ನೊಳಗೊಂಡ ಕಾರ್ಟೆಕ್ಸ್ ಪದರವೂ ಹೊರಭಾಗದಲ್ಲಿ ಹುರುಪುಗಳಂಥ ರಚನೆಗಳಿಂದ ಕೂಡಿದ ಕ್ಯೂಟಿಕಲ್ ಪದರವೂ ಇವೆ. ಮಿಡಲದ ಜೀವಕೋಶಗಳ ನಡುವಣ ಪ್ರದೇಶಗಳಲ್ಲಿ ಅನೇಕ ಅವಕಾಶಗಳಿದ್ದು ಇಲ್ಲೆಲ್ಲ ಗಾಳಿ ತುಂಬಿರುತ್ತದೆ. ಕಾರ್ಟೆಕ್ಸಿನ ಜೀವಕೋಶಗಳಲ್ಲಿ ಮೆಲನಿನ್ ವರ್ಣಕವಿದೆ. ಹುರುಪೆಗಳು ಒಂದರ ಮೇಲೊಂದು ಚಾವಣಿಯ ಹಂಚುಗಳಂತೆ ಕೂದಲ ಮುಂತುದಿಯ ಕಡೆ ಮುಖ ಮಾಡಿದಂತೆ ಜೋಡಣೆಯಾಗಿವೆ. ಆದರೆ ಅಮೆರಿಕದ ಎರಿತಿಜಾನ್ ಎಂಬ ಮುಳ್ಳುಹಂದಿಯ ಬಿರುಗೂದಲುಗಳಲ್ಲಿ ಹುರುಪೆಗಳು ಕೂದಲಿನ ಬುಡದ ಕಡೆ ಮುಖ ಮಾಡಿದಂತೆ ಜೋಡಣೆಯಾಗಿವೆ. ರೋಮಕೂಪದ ಒಂದು ಪಕ್ಕದಲ್ಲಿ ಒಂದು ಮೇದೋಗ್ರಂಥಿಯೂ (ಸಿಬೇಷಸ್ ಗ್ಲಾಂಡ್) ಒಂದು ಬೆವರು ಗ್ರಂಥಿಯೂ ಇವೆ. ಮೇದೋಗ್ರಂಥಿ ಒಂದು ಬಗೆಯ ಜಿಡ್ಡು ಪದಾರ್ಥವನ್ನು ಸ್ರವಿಸುತ್ತದೆ. ಇದರಿಂದ ಚರ್ಮ ಮೃದುವಾಗಿರುವುದಲ್ಲದೆ ಒಣಹವೆಯಲ್ಲಿ ಬಿರುಕು ಬಿಡದಂತೆ ಇರುತ್ತದೆ. ದಿನಕ್ಕೆ ಸುಮಾರು 1-4 ಗ್ರಾಮಿನಷ್ಟು ಜಿಡ್ಡು ಒಟ್ಟು ದೇಹದಲ್ಲಿ ತಯಾರಾಗುತ್ತದೆ. ಚಳಿಗಾಲದಲ್ಲಿ ಜಿಡ್ಡಿನ ಉತ್ಪತ್ತಿ ಕಡಿಮೆ. ರೋಮಕೂಪಕ್ಕೆ ಹಲವಾರು ಸೂಕ್ಷ್ಮ ನರಗಳ ಮತ್ತು ರಕ್ತನಾಳಗಳ ಸಂಪರ್ಕವೂ ಇದೆ. ಅಲ್ಲದೆ ಒಂದು ಪಕ್ಕದಲ್ಲಿ ಒಂದು ಸೂಕ್ಷ್ಮವಾದ ಸ್ನಾಯುವೂ ಇದೆ. ಈ ಸ್ನಾಯುವಿಗೆ ಅರೆಕ್ಟರ್ ಪೈಲಿ ಸ್ನಾಯು ಎಂದು ಹೆಸರು. ಇದರ ಕುಗ್ಗುವಿಕೆಯಿಂದ ಕೂದಲುಗಳು ನಿಮಿರುತ್ತವೆ. ನವಿರೇಳುವುದು. ರೋಮಾಂಚನ ಇವೆಲ್ಲ ಇದರಿಂದ ಆಗುವ ಕ್ರಿಯೆಗಳೇ. ಬೆಕ್ಕು ರೇಗಿದಾಗ ಮೈಯುಬ್ಬಿಸುವುದು ಇದೇ ಕ್ರಿಯೆಯಿಂದ. ಡರ್ಮಿಸಿನ ವಿಶೇಷ ರಚನೆಯೊಂದು ಕೂದಲಿನ ಬೇರುಭಾಗದೊಳಗೆ ಚಾಚಿಕೊಂಡಿದೆ. ಇದಕ್ಕೆ ಪ್ಯಾಪಿಲ ಎಂದು ಹೆಸರು. ಇದರಲ್ಲಿ ಸೂಕ್ಷ್ಮವಾದ ಹಲವಾರು ರಕ್ತನಾಳಗಳೀವೆ. ಇದು ಕೂದಲಿನ ಬೆಳೆವಣಿಗೆಗೆ ಅವಶ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ.

	ಕೂದಲಿನ ಬೆಳವಣಿಗೆ: ರೋಮಕೂಪದ ಬುಡದಲ್ಲಿರುವ ಕೆಲವು ವಿಶೇಷ ಬಗೆಯ ಜೀವಕೋಶಗಳ ವಿಭಜನೆಯಿಂದ ಕೂದಲು ಬೆಳೆಯುತ್ತದೆ. ಎಲ್ಲ ಬಗೆಯ ಕೂದಲುಗಳೂ ತಮ್ಮ ಬೆಳೆವಣಿಗೆಯಲ್ಲಿ ಏಕಪ್ರಕಾರವಾಗಿಲ್ಲ. ಕೂದಲಿನ ಬೆಳೆವಣಿಗೆಯಲ್ಲಿ ಎರಡು ಮುಖ್ಯ ಹಂತಗಳನ್ನು ಗುರುತಿಸಬಹುದು. ಒಂದು ಅನಾಜೆನ್ ಎಂಬ ಬೆಳೆವಣಿಗೆಯ ಹಂತ, ಇನ್ನೊಂದು ಟಿಲೋಜೆನ್ ಎಂಬ ವಿಶ್ರಾಂತಿಯ ಹಂತ. ಇವು ಒಂದರೊಡನೊಂದು ಪರ್ಯಾಯವಾಗಿ ಸಾಗುತ್ತವೆ. ಇದರಿಂದ ಕೂದಲಿನ ಬೆಳವಣಿಗೆಯಲ್ಲಿ ಒಂದು ರೀತಿಯ ಚಕ್ರಗತಿಯನ್ನು ಕಾಣಬಹುದು. ಇದಕ್ಕೆ ಕೂದಲಿನ ಚಕ್ರ(ಹೇರ್ ಸೈಕಲ್) ಎಂದು ಹೆಸರು. ಇವೆರಡು ಹಂತಗಳಲ್ಲಿ ರೋಮಕೂಪ ಮತ್ತು ರೋಮದಂಡಗಳೆರಡೂ ತಮತಮಗೆ ವಿಶಿಷ್ಟವಾದ ಬದಲಾವಣೆಗಳನ್ನು ತೋರಿಸುತ್ತವೆ. ಅನಾಜೆನ್ ಸ್ಥಿತಿಯಲ್ಲಿ ರೋಮಕೂಪದ ನಾಳಗಳು ಪೂರ್ಣವಾಗಿ ತೆರೆದಿದ್ದು ಹೇರಳ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಪೂರೈಸುತ್ತವೆ. ಟಿಲೋಜೆನ್ ಅವಧಿಯಲ್ಲಿ ರಕ್ತನಾಳಗಳ ಸಂಖ್ಯೆ ಕುಗ್ಗಿ ಪೋಷಕಾಂಶಗಳ ಪೂರೈಕೆ ಸ್ಥಗಿತವಾಗುತ್ತದೆ. ಮನುಷ್ಯನಲ್ಲಿ ಕೂದಲಿನ ಬೆಳೆವಣಿಗೆಯ ಅವಧಿ ಸುಮಾರು 3 ಅಥವಾ ಹೆಚ್ಚು ವರ್ಷದಷ್ಟು ಇದೆ. ಇಲಿ ಮುಂತಾದ ಪ್ರಾಣಿಗಳಲ್ಲಿ ಇದು ಕೇವಲ 12 ದಿವಸಗಳ ಕಾಲ ಇರುತ್ತದೆ. ಮನುಷ್ಯನ ತಲೆಗೂದಲು ದಿನಕ್ಕೆ 0.2-0.5 ಮಿಮೀ. ಉದ್ದ ಬೆಳೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಸಾಮಾನ್ಯವಾಗಿ 22"-28" ಉದ್ದ ಬೆಳೆಯುತ್ತದೆ. 15-30 ವರ್ಷಗಳ ವರೆಗೆ ಶೀಘ್ರಗತಿಯಲ್ಲಿ ಬೆಳೆದು ಅನಂತರ ಕೆಲವು ವರ್ಷ ಏಕಪ್ರಕಾರವಾಗಿದ್ದು 50-60 ವರ್ಷದ ಅನಂತರ ವೇಗ ಕುಂಠಿತವಾಗುತ್ತದೆ. ಕೂದಲಿನ ಬೆಳೆವಣಿಗೆ ಹಲವಾರು ಕಾರಕಗಳಿಂದ ನಿಯಂತ್ರಿತವಾಗಿದೆ. ಪೋಷಕಾಂಶಗಳ ಪೂರೈಕೆ, ರೋಮಕೂಪದ ಗೆಡ್ಡೆಯ ಜೀವಕೋಶಗಳ ವಿಭಜನೆ ಮತ್ತು ಬೆಳೆವಣಿಗೆಗಳ ದರ, ಶೈತ್ಯ ಹಾಗೂ ಉಷ್ಣತೆ, ದೇಹದಲ್ಲಿ ಉತ್ಪತ್ತಿಯಾಗುವ ಥೈರಾಕ್ಸಿನ್ ಮುಂತಾದ ವಿಶೇಷ ರೀರಿಯ ಹಾರ್ಮೋನುಗಳು, ದೇಹದ ಆರೋಗ್ಯಸ್ಥಿತಿ ಮುಂತಾದುವು ಈ ಕಾರಕಗಳಲ್ಲಿ ಮುಖ್ಯವಾದವು. ಜ್ವರ, ವಿಪರೀತ ರಕ್ತಸ್ರಾವ, ಶಸ್ತ್ರಚಿಕಿತ್ಸೆ, ಮುಂತಾದ ಪರಿಸ್ಥಿತಿಗಳಲ್ಲಿ ಕೂದಲಿನ ಬೆಳೆವಣಿಗೆಯ ಚಕ್ರ ನಿಂತು ಹೋಗಿರುತ್ತದೆ. ಈ ಸ್ಥಿತಿಗಳು ಪೂರ್ಣಗೊಂಡ 2-3 ತಿಂಗಳ ಅನಂತರ ಹೊಸ ಚಕ್ರ ಆರಂಭವಾಗಿ ಹೊಸ ಕೂದಲು ಹುಟ್ಟುತ್ತದೆ. ಹೀಗೆ ಹೊಸದಾಗಿ ಹುಟ್ಟುವ ಕೂದಲು ಹಳೆಯದನ್ನು ಬದಲಾಯಿತಸುತ್ತದೆ. ಆಗ ಹಳೆಯ ಕೂದಲೆಲ್ಲ ಒಟ್ಟಿಗೆ ಉದುರಿ ಹೋಗುತ್ತದೆ. ಹೆರಿಗೆಯ ಅನಂತರ ಹಳೆಯ ಕೂದಲು ಉದುರಿ ಹೊಸ ಕೂದಲು ಹುಟ್ಟುವುದು ಈ ವಿಧಾನದಿಂದಲೇ.

	ಕೂದಲನ್ನು ಮೇಲಿಂದ ಮೇಲೆ ಕತ್ತರಿಸುವುದರಿಂದ ಇದರ ಬೆಳೆವಣಿಗೆ ಹೆಚ್ಚುತ್ತದೆ ಎಂಬ ಭಾವನೆಯೂ ಸತ್ತಮೇಲೂ ಕೂದಲು ಬೆಳೆಯುತ್ತದೆ ಎಂಬುದೂ ನಿರಾಧಾರವಾದವು. ಸತ್ತಮೇಲೆ ಚರ್ಮ ಆಕುಂಚನಗೊಂಡು ಕೂದಲು ಬೆಳೆದಂತೆ ಕಾಣುವುದೇ ಬಹುಶಃ ಈ ಭಾವನೆಗೆ ಕಾರಣವಾಗಿರಬಹುದು. ಯಾವ ಸಸ್ತನಿಯ ದೇಹದ ಮೇಲೂ ಒಮ್ಮೆ ಹುಟ್ಟಿದ ಕೂದಲು ಶಾಶ್ವತವಾಗಿರುವುದಿಲ್ಲ. ಪ್ರತಿಯೊಂದು ಪ್ರಾಣಿಯ ಜೀವಮಾನದಲ್ಲೂ ನಿರಂತರವಾಗಿ ಬದಲಾಗುತ್ತಿರುತ್ತದೆ. 

	ಕೆಲವು ಸಸ್ತನಿಗಳಲ್ಲಿ ಈ ಬದಲಾವಣೆ ದೇಹದ ಒಂದು ಭಾಗದಲ್ಲಿ ಆರಂಭವಾಗಿ ಕ್ರಮೇಣ ಇತರ ಭಾಗಗಳಿಗೆ ವಿಸ್ತರಿಸುತ್ತದೆ. ಉದಾಹರಣೆಗೆ ಇಲಿ, ಮೊಲ ಇತ್ಯಾದಿ. ಬೆಕ್ಕು, ಗಿನಿ ಹಂದಿ, ಮನುಷ್ಯ ಮುಂತಾದವುಗಳಲ್ಲಿ ಒಂದೊಂದು ಕೂದಲು ಒಂದೊಂದು ಕಾಲದಲ್ಲಿ ಬದಲಾಗುತ್ತಿದ್ದು ಇತರ ಕೂದಲುಗಳ ಬೆಳೆವಣಿಗೆಯಿಂದ ಸ್ವತಂತ್ರವಾಗಿದೆ. 

	ಕೂದಲು ಚರ್ಮಕ್ಕೆ ಹತ್ತಿಕೊಂಡಿರುವ ರೀತಿ ಮತ್ತು ಅದರ ಬೆಳೆವಣಿಗೆಯ ದಿಕ್ಕು ವಿವಿಧ ಪ್ರಾಣಿಗಳಲ್ಲಿ ಭಿನ್ನತೆಯನ್ನು ಪ್ರದರ್ಶಿಸುತ್ತವೆ. ಕೂದಲುಗಳು ಚರ್ಮಕ್ಕೆ ವಿಶೇಷ ಸಾಲುಗಳಲ್ಲಿ ಹತ್ತಿಕೊಂಡಿರುತ್ತವೆ. ಈ ಸಾಲುಗಳಿಗೆ ರೋಮಾಳಿಗಳು(ಹೇರ್ ಟ್ರಾಕ್ಟ್ಸ್) ಎಂದು ಹೆಸರು. ರೋಮಾಳಿಗಳು ಪ್ರತ್ಯೇಕಗೊಳ್ಳುವ ಭಾಗದಲ್ಲಿ ಬೈತಲೆಯಂಥ ರೇಖೆ ಕಾಣುತ್ತದೆ. ಈ ರೇಖೆಗುಂಟ ಕೂದಲುಗಳು ಬೆಳೆಯುತ್ತಿದ್ದು ಅವು ದೇಹದ ಹಿಂಭಾಗದೆಡೆಗೆ(ಅಂದರೆ ಹೊಟ್ಟೆಯ ಕಡೆಗೆ) ಬಾಗಿರುತ್ತವೆ. ಕೈಕಾಲುಗಳಲ್ಲೂ ಕೂದಲುಗಳು ಅಂಗದ ಹಿಂಭಾಗದೆಡೆಗೆ ಹಾಗೂ ಪಾದದೆಡೆಗೆ ಬಾಗಿರುತ್ತವೆ. ಸ್ಲಾತ್ ಎಂಬ ಪ್ರಾಣಿಯಲ್ಲಿ ಮಾತ್ರ ಈ ಬಾಗುವಿಕೆ ವಿರುದ್ಧ ಬಗೆಯದು. ಈ ಪ್ರಾಣಿ ಯಾವಾಗಲೂ ಮರದ ರೆಂಬೆಗಳಿಗೆ ನೇತು ಬಿದ್ದು ಚಲಿಸುವುದರಿಂದ ಇದರ ಮೈಮೇಲೆ ಬಿದ್ದ ಮಳೆಯ ನೀರು ಸುಲಭವಾಗಿ ಹರಿದು ಹೋಗಲೆಂದು ಈ ಮಾರ್ಪಾಡು ಆಗಿರಬೇಕೆಂದು ತಜ್ಞರು ಊಹಿಸಿದ್ದಾರೆ. ಕೆಲವು ಬಾರಿ ರೋಮಾಳಿಗಳು ವರ್ತುಲಾಕಾರದಲ್ಲಿರುತ್ತವೆ. ಇವನ್ನು ಸುಳಿಗಳು(ವಾರ್ಟಿಸೀಸ್ ಅಥವಾ ಹ್ವಾರಲ್ಸ್) ಎನ್ನಲಾಗುತ್ತದೆ.

	ಕೂದಲಿನ ಪ್ರಥಮ ಹಾಗೂ ಅತಿಮುಖ್ಯವಾದ ಕಾರ್ಯ ಪ್ರಾಣೀಗಳ ದೇಹದ ಉಷ್ಣತೆಯನ್ನು ಕಾಪಾಡುವುದು ಮತ್ತು ದೇಹಕ್ಕೆ ಶೈತ್ಯದಿಂದ ರಕ್ಷಣೆಯೊದಗಿಸುವುದು. ಅತಿನೇರಳೆ ಕಿರಣಗಳಿಂದಲೂ ರಕ್ಷಿಸಿ ಚರ್ಮದ ಏಡಿಗಂತಿ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಎರಡನೆಯದಾಗಿ ಕೂದಲು ಸ್ಪರ್ಶಗ್ರಾಹಿ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ನಿಶಾಚರ ಪ್ರಾಣಿಗಳಲ್ಲಿ ಇದು ಮುಖ್ಯವಾದ ಕೆಲಸ. ಅಲ್ಲದೆ ತನ್ನ ವಿವಿಧ ಬಣ್ಣಗಳಿಂದ ಮತ್ತು ವಿನ್ಯಾಸಗಳಿಂದ ಸೂಕ್ಷ್ಮವಾದ ಛದ್ಮವಾಗಿ ಶತ್ರುಗಳ ಕಣ್ಣಿಗೆ ಬೀಳದಂತೆ ಮಾಡಲು, ಸಂಗಾತಿಯನ್ನು ಆಕರ್ಷಿಸಲು ಸಹಕಾರಿಯಾಗಿದೆ. 

	ಕೂದಲಿನ ಉಪಯೋಗಗಳು : ವಿವಿಧ ಬಗೆಯ ಕೂದಲುಗಳಿಗೆ ಬೇರೆ ಬೇರೆ ರೀತಿಯ ಉಪಯೋಗಗಳಿವೆ. ಮನೆಕಟ್ಟುವುದಕ್ಕೆ ಉಪಯೋಗಿಸುವ ಗಾರೆಯನ್ನು ಬಂಧಿಸಲು ಮತ್ತು ಕೃತಕವಾಗಿ ತಯಾರಿಸುವ ಚಾವಣಿಗಳ ದನಗಳ ಕೂದಲನ್ನು ಬಳಸುತ್ತಾರೆ. ಒಂಟೆಯ ಕೂದಲನ್ನು ಜಮಖಾನ ಬಟ್ಟೆ, ಡೇರೆಗಳ ಹೊದಿಕೆ ಮುಂತಾದುವನ್ನು ಮಾಡಲು ಉಪಯೋಗಿಸುತ್ತಾರೆ. ಅರೇಬಿಯದ ಒಂಟೆಯ ಕೂದಲು ಹೆಚ್ಚು ಮೃದುವಾಗಿಯೂ ಬೆಲೆಬಾಳೂವಂಥದೂ ಆಗಿದೆ. ಹಂದಿ ಮತ್ತು ಅಳಿಲುಗಳ ಕೂದಲಿನಿಂದ ಕುಂಚ ಮಾಡುತ್ತಾರೆ. ಕುರಿ, ಮೇಕೆ ಮುಂತಾದುವುಗಳ ಉಣ್ಣೆಯ ಉಪಯೋಗವಂತೂ ಎಲ್ಲರಿಗೂ ತಿಳಿದದ್ದೇ. ಕುದುರೆಯ ಬಾಲ ಮತ್ತು ಅಯಾಲಿನ ಕೂದಲನ್ನು ಬಟ್ಟೆ, ಬಲೆ ಮತ್ತು ಕುಂಚಗಳ ತಯಾರಿಕೆಯಲ್ಲೂ ಉದ್ದನೆಯ ಬಗೆಯನ್ನು ಪಿಟೀಲಿನ ಕಮಾನುಗಳ ತಯಾರಿಕೆಯಲ್ಲೂ ಚಿಕ್ಕ ಬಗೆಯದನ್ನು ಸೋಫ, ಹಾಸಿಗೆಗಳಿಗೆ ತುಂಬಲೂ ಬಳಸುತ್ತಾರೆ. ಮನುಷ್ಯರ ಕೂದಲನ್ನು ಚೌರಿ,ವಿಗ್, ಟೋಫನ್ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ವೈದ್ಯಕೀಯ ನ್ಯಾಯಶಾಸ್ತ್ರದಲ್ಲಿ ಕೂದಲಿನ ಪರೀಕ್ಷೆಯಿಂದ ಅಪರಾಧಿಗಳನ್ನು ಪತ್ತೆಹಚ್ಚಬಹುದೆಂದು ಗೊತ್ತಾಗಿದೆ. ಕೂದಲಿನ ಬಣ್ಣ, ಗುಣ ಅದು ಕತ್ತರಿಸಿದ್ದೊ ಸುಟ್ಟಿದ್ದೊ ಎಂಬ ವಿವರಗಳನ್ನು ಅಪರಾಧ ಪತ್ತೆಯಲ್ಲಿ ಬಳಸಬಹುದು. 
   (ಡಿ.ಪಿ.ಜೆ; ಬಿ.ವೈ.ಎಂ.ಜಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ